ಅಣಿಮೀನು
	
ಕ್ಲಾರಿಯಿಡೆ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಮೀನಿನ ಸಾಮಾನ್ಯ ಹೆಸರು. ಇದರ ವೈಜ್ಞಾನಿಕ ನಾಮ ಕ್ಲೇರಿಯಸ್ ಬ್ಯೂಟ್ರಾಕಸ್.  ಮೀಸೆ ಮೀನುಗಳ ಸಂಬಂಧಿ. ಬೆನ್ನಿನ ಈಜು ರೆಕ್ಕೆ ಬಹಳ ಉದ್ದವಾಗಿದ್ದು 62 ರಿಂದ 76 ಕದಿರುಗಳಿವೆ.  ತೋಳಿನ ಈಜುರೆಕ್ಕೆಯಲ್ಲಿ ಒಂದು ಬಲವಾದ ಮುಳ್ಳು ಮತ್ತು 8 ರಿಂದ 11 ಕದಿರುಗಳಿವೆ.  ನಡುವಿನ ಈಜು ರೆಕ್ಕೆಯಲ್ಲಿ 6, ಗುದುದ ಈಜು ರೆಕ್ಕೆಯಲ್ಲಿ 45 ರಿಂದ 58, ಬಾಲದ ಈಜು ರೆಕ್ಕೆಯಲ್ಲಿ 15 ರಿಂದ 17 ಕದಿರುಗಳಿವೆ.  4 ಜೊತೆ ಮೀಸೆ (ಬಾರ್ಬಲ್ಸ್) ಗಳಿವೆ.  ಇದರ ಬೆನ್ನಿನ ಈಜುರೆಕ್ಕೆ ಉದ್ದವಾಗಿದೆ.  ದೇಹ ತಲೆಗಿಂತ 5 ರಿಂದ 6 ರಷ್ಟು ಉದ್ದವಾಗಿದೆ.  ತಲೆ ಸ್ವಲ್ಪ ಮಟ್ಟಿಗೆ ಚಪ್ಪಟೆಯಾಗಿದೆ. ಇದರ ಬಣ್ಣ ಕೆಂಪು ಮಿಶ್ರಿತ ಕಂದು ಅಥವಾ ಊದಾಮಿಶ್ರಿತ ಕಪ್ಪು.  ಸುಮಾರು 45 ಸೆಂ.ಮೀ ಉದ್ದ ಬೆಳೆಯುತ್ತದೆ. 
	
ಈ ಮೀನು ದೇಶದ ಎಲ್ಲ ಭಾಗಗಳಲ್ಲೂ ಸಿಗುತ್ತದಾದರೂ ಚೇಳುಮೀನಿನಂತೆ ವಿಶೇಷವಾಗಿ ಸಿಕ್ಕುವುದಿಲ್ಲ.  ಇದು ಆಹಾರ ದೃಷ್ಟಿಯಿಂದ ಹೆಚ್ಚು ಪ್ರಸಿದ್ಧಿಯಾಗಿದ್ದು ಬಹು ಬೆಲೆಯುಳ್ಳದ್ದಾಗಿದೆ. 
	
ಸಣ್ಣ ಅಕಶೇರುಕಗಳು, ನೀರಿನ ಕೀಟ, ಪಾಚಿಯವಸ್ತು, ಇದು ಆಹಾರವಾಗಿ ಬಳಸುತ್ತದೆ.  ವಂಶಾಭಿವೃದ್ಧಿ ಏಪ್ರಿಲ್-ಜೂನ್ ತಿಂಗಳುಗಳಲ್ಲಿ,  ಮರಿಗಳನ್ನು ಕೆರೆಯ ಅಂಚಿನ ಪ್ರದೇಶದಲ್ಲಿ ಹುಲ್ಲು ಬೆಳೆದಿರುವ ಚೌಗುಗಳಲ್ಲಿ ಶೇಖರಿಸಬಹುದು. ಇತ್ತೀಚೆಗೆ ಈ ಮೀನಿನ ಜೀವನ ಚರಿತ್ರೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಲಾಗುತ್ತಿದ್ದು ಇದರ ಕೃತಕ ಸಂತಾನೋತ್ಪತ್ತಿ ಮಾಡಿಸಿ ಮರಿಗಳನ್ನು ಉತ್ಪಾದಿಸಲು ಪ್ರಯತ್ನಿಸಲಾಗುತ್ತಿದೆ. ಇದು ಸ್ವಲ್ಪ ನಿಧಾನವಾಗಿ ಬೆಳೆಯತ್ತದಾದರೂ, ಉತ್ತಮ ಬೆಲೆ ಇರುವುದರಿಮದ ಸಾಕಾಣಿಕೆ ಮಾಡಬಹುದಾಗಿದೆ.                  (ನೋಡಿ- ಮೀಸೆಮೀನು)
(ಬಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ